ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಪುಸ್ತಕಗಳು
Share
ಯಕ್ಷಚಿಂತನೆ : ಯಕ್ಷಗಾನದ ಪ್ರಮುಖ ಘಟ್ಟಗಳ ದಾಖಲೆ

ಲೇಖಕರು : ರಾಜಶೇಖರ ಜೋಗಿನ್ಮನೆ
ಮ೦ಗಳವಾರ, ಫೆಬ್ರವರಿ 23 , 2016

ಡಾ.ಆನಂದರಾಮ ಉಪಾಧ್ಯ ಅವರು ಬ್ಯಾಂಕಿಂಗ್ ವೃತ್ತಿಯಲ್ಲಿದ್ದವರಾದರೂ ವೃತ್ತಿಯ ಆಚೆ ಉಸಿರಾಡಿದ್ದು ಯಕ್ಷಗಾನವನ್ನೇ. ಯಕ್ಷಗಾನ ಪ್ರಸಂಗಗಳ ಕುರಿತು ಎಂ.ಫಿಲ್ ಮತ್ತು ಪಿಎಚ್.ಡಿ. ಅಧ್ಯಯನ ಮಾಡಿರುವ ಅವರಿಗೆ ಯಕ್ಷಗಾನವೆಂಬ ಕಲೆಯ ಒಳಹೊರಗು ಚೆನ್ನಾಗಿ ಗೊತ್ತು. ಅದರ ಇತಿಹಾಸವೂ ವರ್ತಮಾನವೂ ಗೊತ್ತು. ಹೀಗಾಗಿ ಯಕ್ಷಗಾನದ ನಾಳೆಗಳ ಕುರಿತೂ ಅವರು ಹೇಳಬಲ್ಲರು.

15 ವರ್ಷಗಳಿಂದ ಯಕ್ಷಗಾನ ರಂಗಭೂಮಿಯ ಮೇಲಿನ ಪ್ರೀತಿಯಿಂದಲೇ ಅವರು ಬರೆಯುತ್ತ ಬಂದವರು. ಈ ಕಲೆಯ ಕುರಿತಾಗಿ, ಕನ್ನಡ ಸಾಹಿತ್ಯ ಕುರಿತಾಗಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ ಯೋಚನೆಗಳು, ವಿಚಾರಗಳು ಬಿಡಿ ಬಿಡಿಯಾಗಿ ದಾಖಲಾಗಿದ್ದವು. ವಿಭಿನ್ನ ನೆಲೆಯಲ್ಲಿ ಹೊರಹೊಮ್ಮಿದ ಅವೆಲ್ಲ ಇಡಿಯಾಗಿ ‘ಯಕ್ಷಚಿಂತನೆ’ ಎಂಬ ಹೆಸರಿನಲ್ಲಿ ಪುಸ್ತಕರೂಪ ತಾಳಿವೆ. ಯಕ್ಷಗಾನ ಕುರಿತಾದ 20 ಲೇಖನಗಳು ಇದರಲ್ಲಿವೆ. ಧನಾತ್ಮಕ ಅಂಶ ಮಾತ್ರವಲ್ಲದೆ ಋಣಾತ್ಮಕ ಬದಲಾವಣೆಗಳನ್ನೂ ಗುರುತಿಸುತ್ತ ಹೋಗುವ ಇಲ್ಲಿಯ ಬರಹಗಳು; ಈ ಕಲೆಯ ಬೇಕು-ಬೇಡಗಳನ್ನು ರ್ಚಚಿಸುತ್ತಲೇ ಆಗಬೇಕಾದುದೇನು ಎಂಬೆಡೆಗೂ ಗಮನಹರಿಸುತ್ತವೆ.
ಕೃತಿ : ಯಕ್ಷಚಿಂತನೆ
ಲೇಖಕರು : ಡಾ. ಆನಂದರಾಮ ಉಪಾಧ್ಯ
ಪ್ರಕಾಶಕರು :
ಗೀತಾಂಜಲಿ ಪಬ್ಲಿಕೇಷನ್ಸ್, ನಂ. 60, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು – 560072
ಪುಸ್ತಕದ ಬೆಲೆ: ರೂ. 200
ಪುಟಗಳು : 252
ಕರ್ನಾಟಕ ಸರ್ಕಾರ ಪ್ರಕಟಿಸಿದ ಎಲ್ಲ ರಂಗಗಳ ಸಮೀಕ್ಷೆ ರೂಪದ ಸಂಕಲನಕ್ಕಾಗಿ ಬರೆದ ‘ಸ್ವಾತಂತ್ರ್ಯೊತ್ತರ ಯಕ್ಷಗಾನ ರಂಗಭೂಮಿ’ ಈ ಪುಸ್ತಕದ ಮೊದಲ ಬರಹ. ಯಕ್ಷಗಾನ ರಂಗಭೂಮಿ ಯಾವ ಸ್ವರೂಪದಲ್ಲಿತ್ತು; ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹೇಗೆ ಬದಲಾವಣೆಗೆ ತೆರೆದುಕೊಂಡಿತು, ಡೇರೆ ಮೇಳಗಳು ಶುರುವಾದ ನಂತರ ವಾಣಿಜ್ಯಿಕ ಅಂಶಗಳು ಸೇರಿಕೊಂಡ ಬಗೆ, ಅದರಿಂದಾದ ಪರಿಣಾಮ ಎಲ್ಲವನ್ನೂ ಕೂಲಂಕಷವಾಗಿ ಈ ಬರೆಹ ವಿವರಿಸಿದೆ.

ಯಕ್ಷಗಾನದ ತಿಟ್ಟುಗಳನ್ನು ಪರಿಚಯಿಸಿದೆ. ಮೂಡಲಪಾಯ, ಘಟ್ಟದ ಕೋರೆ, ದೊಡ್ಡಾಟ, ಸಣ್ಣಾಟ, ಕೃಷ್ಣಪಾರಿಜಾತ – ಅದರ ಸ್ಥಿತ್ಯಂತರದ ಘಟ್ಟಗಳನ್ನು ರ್ಚಚಿಸಿದೆ. ಕಾಲಮಿತಿ ಪ್ರದರ್ಶನಗಳು, ಯಕ್ಷಗಾನ ವಿಮರ್ಶೆ, ತಾಳಮದ್ದಲೆ, ಹೂವಿನಕೋಲು – ಹೀಗೆ ಎಲ್ಲ ರೀತಿಯಲ್ಲೂ ಯಕ್ಷಗಾನವನ್ನು ಅವಲೋಕಿಸುವ ಈ ಬರಹ ಈ ಪುಸ್ತಕಕ್ಕೂ ಯಕ್ಷಗಾನ ಕಲೆಗೂ ಪ್ರವೇಶಿಕೆಯಂತಿದೆ. ಜತೆಗೆ ‘ಯಕ್ಷಗಾನ ಅತ್ತ ಮ್ಯೂಸಿಯಂ ಸೊತ್ತಾಗದಂತೆಯೂ ಇತ್ತ ವ್ಯಾಪಾರಿ ಸರಕಾಗದಂತೆಯೂ ನೋಡಿಕೊಳ್ಳುವುದು ಎಲ್ಲ ಆಸಕ್ತರ ಹೊಣೆಯಾಗಿದೆ.

5000ಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳಿದ್ದರೂ ಯಕ್ಷಗಾನ ಕವಿಗಳು ಹಾಗೂ ಪ್ರಸಂಗಗಳ ಬಗ್ಗೆ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನಿಖರವಾದ ಸ್ಥಾನ ಲಭ್ಯವಾಗಿಲ್ಲ. ಯಕ್ಷಗಾನ ಸಾಹಿತ್ಯದ ಬೆಲೆ ಕಟ್ಟುವ ಕಾರ್ಯವಾಗಬೇಕಾಗಿದೆ’ ಎಂಬಂಥ ಕಳಕಳಿ ಚಿಂತನಾರ್ಹವಾಗಿದೆ. ಯಕ್ಷಗಾನ ಸಂಶೋಧನೆಯ ಮಜಲುಗಳನ್ನು ಲೇಖನವೊಂದು ದಾಖಲಿಸಿದೆ. ಸುಮಾರು 500 ವರ್ಷಗಳಿಂದ ಯಕ್ಷಗಾನ ಪ್ರಸಂಗಗಳ ರಚನೆ ನಡೆದಿದ್ದಲ್ಲದೆ, ಹಾಡುಗಬ್ಬ ರೂಪದ ಈ ಕನ್ನಡ ಕಿರುಕಾವ್ಯ ಜನಜೀವನದ ಸಾಂಸ್ಕೃತಿಕ ಬದುಕಿಗೆ ಪ್ರೇರಣೆಯಾಗಿತ್ತು ಎಂಬುದರಿಂದ ಹಿಡಿದು, ಕಳೆದ 75 ವರ್ಷಗಳಲ್ಲಿ ಈ ಕಲೆಯ ಬೆಳವಣಿಗೆಯ ಹಾದಿ ಹೇಗಿತ್ತು ಎಂಬುದನ್ನು ಅವರಿಲ್ಲಿ ವಿವರಿಸಿದ್ದಾರೆ. ಯಕ್ಷಗಾನ ಮೂಡಲಪಾಯ, ಯಕ್ಷಗಾನ ಹಾಗೂ ಕನ್ನಡ ವಿದ್ವತ್ ಪರಂಪರೆ, ತಾಳಮದ್ದಲೆಯ ಒಳಹೊರಗು, ಯಕ್ಷಗಾನಕ್ಕೆ ಕುರಿಯ ವಿಠಲಶಾಸ್ತ್ರಿಗಳು ಹಾಗೂ ರ್ಕ ಪರಮಯ್ಯ ಹಾಸ್ಯಗಾರರು ನೀಡಿದ ಕೊಡುಗೆ,

ಕಾರಂತರು ಮತ್ತು ಯಕ್ಷಗಾನ, ಪ್ರಸಂಗ ಸಾಹಿತ್ಯದಲ್ಲಿ ಕೌಟುಂಬಿಕ ಚಿತ್ರಣ, ಯಕ್ಷಗಾನ ಪ್ರಸಂಗಗಳ ಸಾಹಿತ್ಯದ ಮಹತ್ವ – ಮುಂತಾದ ಲೇಖನಗಳು ಪುಸ್ತಕಕ್ಕೆ ಮೆರುಗು ನೀಡಿವೆ. ಎರಡನೇ ಭಾಗದಲ್ಲಿ ಸೇಡಿಯಾಪು ಅವರ ಕಾವ್ಯ, ವಿ. ಕೃ. ಗೋಕಾಕರ ಸಾಹಿತ್ಯ, ಕೆಎಸ್​ನ ಮತ್ತು ಅಡಿಗರ ಕುರಿತು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಾದ ಬರಹಗಳಿವೆ. ಒಟ್ಟಾರೆ ಯಕ್ಷಗಾನದ ಹಲವು ಪ್ರಮುಖ ಘಟ್ಟಗಳನ್ನು ದಾಖಲಿಸಿದ ಪುಸ್ತಕವಿದು.

****************


ಕೃಪೆ : vijayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ